ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಅವರಿಗೆ DG&IGP ಮೆಡಲ್ – ಕರ್ತವ್ಯನಿಷ್ಠೆಗೆ ಸಂದ ಗೌರವ

ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಅವರಿಗೆ DG&IGP ಮೆಡಲ್ – ಕರ್ತವ್ಯನಿಷ್ಠೆಗೆ ಸಂದ ಗೌರವ

ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಅವರಿಗೆ DG&IGP ಮೆಡಲ್ – ಕರ್ತವ್ಯನಿಷ್ಠೆಗೆ ಸಂದ ಗೌರವ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ N. Shashi Kumar ಅವರಿಗೆ DG&IGP ಮೆಡಲ್ ಲಭಿಸಿರುವುದು ಅವರ ಕರ್ತವ್ಯನಿಷ್ಠೆ, ದಕ್ಷ ಆಡಳಿತ ಮತ್ತು ಪರಿಣಾಮಕಾರಿ ಪೊಲೀಸ್ ಸೇವೆಗೆ ಸಂದ ಗೌರವವಾಗಿದೆ.

ಕಮಿಷನರ್ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ಎನ್. ಶಶಿಕುಮಾರ್ ಅವರು ಅವಳಿ ನಗರದ ಕಾನೂನು ಸುವ್ಯವಸ್ಥೆ ಬಲಪಡಿಸುವ ನಿಟ್ಟಿನಲ್ಲಿ ಹಲವು ಮಹತ್ವದ ಕ್ರಮಗಳನ್ನು ಕೈಗೊಂಡಿದ್ದಾರೆ. ವಿಶೇಷವಾಗಿ ಗಾಂಜಾ ಸೇರಿದಂತೆ ಮಾದಕ ವಸ್ತುಗಳ ದಂಧೆ ವಿರುದ್ಧ ಸಮರ ಸಾರುವ ಮೂಲಕ ಸಮಾಜಘಾತಕ ಚಟುವಟಿಕೆಗಳ ನಿಯಂತ್ರಣಕ್ಕೆ ಆದ್ಯತೆ ನೀಡಿದ್ದಾರೆ. ಈ ಕ್ರಮದಿಂದ ಅನೇಕ ಪಾಲಕರು ಮತ್ತು ನಾಗರಿಕರು ಸಂತಸ ವ್ಯಕ್ತಪಡಿಸಿದ್ದಾರೆ.

ಅಲ್ಲದೆ, ಪುಂಡರು ಹಾಗೂ ರೌಡಿಶೀಟರ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಂಡು ರೌಡಿ ಪರೇಡ್ ನಡೆಸುವ ಮೂಲಕ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಪ್ರಯತ್ನ ಮಾಡಿದ್ದಾರೆ. ಜನಸ್ನೇಹಿ ಪೊಲೀಸ್ ವ್ಯವಸ್ಥೆ ಜಾರಿಗೆ ತಂದು ಸಾರ್ವಜನಿಕರಲ್ಲಿ ಪೊಲೀಸ್ ಇಲಾಖೆಯ ಬಗ್ಗೆ ವಿಶ್ವಾಸ ಮೂಡಿಸುವ ಕೆಲಸ ಮಾಡಿದ್ದಾರೆ.

ಸ್ಪರ್ಧಾತ್ಮಕ ಪರೀಕ್ಷೆಗಳ ಅಭ್ಯರ್ಥಿಗಳ ಪ್ರತಿಭಟನೆ ಸೇರಿದಂತೆ ಸೂಕ್ಷ್ಮ ಸಂದರ್ಭಗಳಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಅವರು ತಾಳ್ಮೆ ಹಾಗೂ ಪ್ರೌಢಿಮೆ ಪ್ರದರ್ಶಿಸಿದ್ದಾರೆ. ಪ್ರತಿಭಟನಾಕಾರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಯಾವುದೇ ಅಹಿತಕರ ಘಟನೆ ನಡೆಯದಂತೆ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ.

ನಗರದಲ್ಲಿ ನಡೆದ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳ ವೇಳೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು, ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದೆ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಎನ್. ಶಶಿಕುಮಾರ್ ಅವರ ಈ ಸಾಧನೆಗಳು ಮತ್ತು ಸೇವಾ ಮನೋಭಾವವನ್ನು ಗುರುತಿಸಿ DG&IGP ಮೆಡಲ್ ನೀಡಿ ಗೌರವಿಸಲಾಗಿದ್ದು, ಇದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತಾಲಯಕ್ಕೆ ಹೆಮ್ಮೆಯ ಸಂಗತಿಯಾಗಿದೆ. ಸಾರ್ವಜನಿಕರು, ವಿವಿಧ ಸಂಘಟನೆಗಳು ಹಾಗೂ ಗಣ್ಯರು ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.