ಮಾರಕಾಸ್ತ್ರ ಹಿಡಿದು ಓಡಾಡಿದ್ರೆ ಖಾಕಿ ಖಡಕ್ ಆಕ್ಷನ್: ಹುಬ್ಬಳ್ಳಿ-ಧಾರವಾಡದಲ್ಲಿ ಆಂಟಿ ಸ್ಟಾಬಿಂಗ್ ಸ್ಕ್ವಾಡ್ ಅಲರ್ಟ್

ಮಾರಕಾಸ್ತ್ರ ಹಿಡಿದು ಓಡಾಡಿದ್ರೆ ಖಾಕಿ ಖಡಕ್ ಆಕ್ಷನ್: ಹುಬ್ಬಳ್ಳಿ-ಧಾರವಾಡದಲ್ಲಿ ಆಂಟಿ ಸ್ಟಾಬಿಂಗ್ ಸ್ಕ್ವಾಡ್ ಅಲರ್ಟ್

ಹುಬ್ಬಳ್ಳಿ-ಧಾರವಾಡ: ಅವಳಿ ನಗರದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ಓಡಾಡುವವರ ವಿರುದ್ಧ ಪೊಲೀಸ್ ಇಲಾಖೆ ಸಮರ ಸಾರಿದೆ. ಜನನಿಬಿಡ ಪ್ರದೇಶಗಳಲ್ಲಿ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಪೊಲೀಸ್ ಕಣ್ಗಾವಲು ಮತ್ತಷ್ಟು ಬಿಗಿಗೊಳಿಸಲಾಗಿದೆ.

ನಗರದ ಎಲ್ಲಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಆಂಟಿ ಸ್ಟಾಬಿಂಗ್ ಸ್ಕ್ವಾಡ್‌ಗಳನ್ನು ಕಾರ್ಯಗತಗೊಳಿಸಲಾಗಿದೆ. ಈ ವಿಶೇಷ ತಂಡಗಳು ಸಾರ್ವಜನಿಕ ಸ್ಥಳಗಳಲ್ಲಿ ಅನುಮಾನಾಸ್ಪದವಾಗಿ ಓಡಾಡುವವರು, ಮಾರಕಾಸ್ತ್ರ ಹೊಂದಿರುವ ಶಂಕಿತ ವ್ಯಕ್ತಿಗಳು ಹಾಗೂ ಅಪರಾಧ ಹಿನ್ನೆಲೆ ಹೊಂದಿರುವವರ ಮೇಲೆ ನಿಗಾ ಇಡಲಿವೆ.

ನೂತನವಾಗಿ ಆಯುಕ್ತರಾಗಿ ಬಂದಿರುವ ಭೂಷಣ ಬೋರಸೇ ಅವರು ಪುಲ್ ಸ್ಟ್ರೀಕ್ ಆಗಿ ಕೆಲಸ ಮಾಡುವಂತೆ ಪೊಲೀಸ್ ಸಿಬ್ಬಂದಿಗಳಿಗೆ ಸೂಚನೆ ನೀಡಿದ್ದಾರೆ. ಅದರಂತೆವಿಶೇಷವಾಗಿ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಮಾರುಕಟ್ಟೆ, ಪ್ರಮುಖ ವೃತ್ತಗಳು ಹಾಗೂ ಜನನಿಬಿಡ ಪ್ರದೇಶಗಳಲ್ಲಿ ಸ್ಕ್ವಾಡ್‌ಗಳಿಂದ ತೀವ್ರ ತಪಾಸಣೆ ನಡೆಸಲಾಗುತ್ತಿದೆ.

ಯುವಕರು ಸೇರಿದಂತೆ ಕೆಲವರು ಚಾಕು, ಮಾರಕಾಸ್ತ್ರಗಳನ್ನು ಇಟ್ಟುಕೊಂಡು ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುತ್ತಿರುವ ಬಗ್ಗೆ ದೂರುಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.

ಸಾರ್ವಜನಿಕ ಸ್ಥಳದಲ್ಲಿ ಮಾರಕಾಸ್ತ್ರ ಹೊಂದಿರುವುದು ಅಥವಾ ಅನುಮಾನಾಸ್ಪದ ರೀತಿಯಲ್ಲಿ ಸಾಗಿಸುವುದು ಕಂಡುಬಂದರೆ, ಅಂತಹವರ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.

ಇನ್ನು ಕೇವಲ ವ್ಯಕ್ತಿಗಳ ತಪಾಸಣೆಗೆ ಸೀಮಿತವಾಗದೆ, ವಾಹನಗಳ ಮೇಲೂ ಪೊಲೀಸರು ವಿಶೇಷ ನಿಗಾ ವಹಿಸಿದ್ದಾರೆ. ಇಂದು ಒಂದೇ ದಿನ 215 ವಾಹನಗಳನ್ನು ಪರಿಶೀಲನೆ ನಡೆಸಲಾಗಿದ್ದು, ಅನುಮಾನಾಸ್ಪದ ವಾಹನಗಳು ಹಾಗೂ ವ್ಯಕ್ತಿಗಳ ಕುರಿತು ಪರಿಶೀಲನೆ ಮುಂದುವರಿದಿದೆ.

ಪೊಲೀಸ್ ತಂಡಗಳು ಪ್ರಮುಖ ರಸ್ತೆಗಳಲ್ಲಿ ಹಾಗೂ ಜನನಿಬಿಡ ಪ್ರದೇಶಗಳಲ್ಲಿ ವಾಹನಗಳನ್ನು ತಡೆದು ದಾಖಲೆಗಳನ್ನು ಪರಿಶೀಲಿಸುತ್ತಿವೆ. ಜೊತೆಗೆ ವಾಹನಗಳಲ್ಲಿ ಅಕ್ರಮವಾಗಿ ಮಾರಕಾಸ್ತ್ರಗಳನ್ನು ಸಾಗಿಸಲಾಗುತ್ತಿದೆಯೇ ಎಂಬ ಬಗ್ಗೆಯೂ ತಪಾಸಣೆ ನಡೆಸಲಾಗುತ್ತಿದೆ.

ಅವಳಿ ನಗರದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವುದು ಹಾಗೂ ಯಾವುದೇ ರೀತಿಯ ಅಪರಾಧ ಕೃತ್ಯಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸುವುದು ಈ ವಿಶೇಷ ಕಾರ್ಯಾಚರಣೆಯ ಪ್ರಮುಖ ಉದ್ದೇಶವಾಗಿದೆ.
ಮಾರಕಾಸ್ತ್ರಗಳನ್ನು ಹೊಂದಿರುವುದು ಸ್ಟೈಲ್ ಅಲ್ಲ, ಕಾನೂನುಬಾಹಿರ ಕೃತ್ಯ ಎಂಬ ಸಂದೇಶವನ್ನು ಪೊಲೀಸ್ ಇಲಾಖೆ ನೀಡಿದೆ.

ಯಾರೇ ಆಗಿರಲಿ, ಸಾರ್ವಜನಿಕ ಸ್ಥಳಗಳಲ್ಲಿ ಮಾರಕಾಸ್ತ್ರ ಹಿಡಿದು ಓಡಾಡುವುದು ಕಂಡುಬಂದರೆ ಅಂತಹವರ ವಿರುದ್ಧ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಒಟ್ಟಿನಲ್ಲಿ, ಮಾರಕಾಸ್ತ್ರ ಹಿಡಿದು ಓಡಾಡುವವರಿಗೆ ಬ್ರೇಕ್ ಹಾಕಲು ಹುಬ್ಬಳ್ಳಿ-ಧಾರವಾಡ ಪೊಲೀಸರು ಫುಲ್ ಅಲರ್ಟ್ ಆಗಿದ್ದು, ಆಂಟಿ ಸ್ಟಾಬಿಂಗ್ ಸ್ಕ್ವಾಡ್‌ಗಳ ಮೂಲಕ ಅವಳಿ ನಗರದ ಮೂಲೆಮೂಲೆಗಳಲ್ಲೂ ಕಣ್ಗಾವಲು ಹೆಚ್ಚಿಸಲಾಗಿದೆ.