ಗೋಕುಲ್ ರೋಡ್‌ನಲ್ಲಿ ಅಕ್ರಮ ಶೆಡ್ ನಿರ್ಮಾಣ: ನೋಟಿಸ್ ನೀಡಿ ಖಡಕ್ ಎಚ್ಚರಿಕೆ ನೀಡಿದ ಪಾಲಿಕೆ ಆಯುಕ್ತ ಡಾ.ರುದ್ರೇಶ್ ಘಾಳಿ!
ಗೋಕುಲ್ ರೋಡ್‌ನಲ್ಲಿ ಅಕ್ರಮ ಶೆಡ್ ನಿರ್ಮಾಣ: ಕೊನೆಯ ನೋಟಿಸ್ ನೀಡಿ ಖಡಕ್ ಎಚ್ಚರಿಕೆ ನೀಡಿದ ಪಾಲಿಕೆ ಆಯುಕ್ತರು
– ನಾಲ್ಕೈದು ದಿನಗಳಲ್ಲಿ ಶೆಡ್ ತೆರವುಗೊಳಿಸುವುದಾಗಿ ಮಾಲೀಕರ ಭರವಸೆ ನೀಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿಯನ್ನು ನೀಡಿದ್ದಾರೆ.
ಹುಬ್ಬಳ್ಳಿ: ವಾಣಿಜ್ಯ ನಗರಿಯಾದ ಹುಬ್ಬಳ್ಳಿಯ ಗೋಕುಲ್ ರೋಡ್‌ನ ಕೃಷ್ಣಾಪುರ ಓಣಿಯಲ್ಲಿ ಕೃಷಿ ಭೂಮಿಯಲ್ಲಿ ಅನಧಿಕೃತವಾಗಿ ನಿರ್ಮಾಣಗೊಂಡ ಶೆಡ್‌ಗೆ ಪಾಲಿಕೆಯಿಂದ ಕೊನೆಯ ಎಚ್ಚರಿಕೆ ನೀಡಲಾಗಿದೆ. ಶೆಡ್ ಮುಂದೆ ಜೆಸಿಬಿ ನಿಲ್ಲಿಸಿ, ತಕ್ಷಣ ತೆರವುಗೊಳಿಸುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಗೋಕುಲ್ ರೋಡ್ ಮುಖ್ಯ ರಸ್ತೆಯಲ್ಲಿರುವ ಈ ಜಾಗವು ಉತಾರ ದಾಖಲೆಗಳ ಪ್ರಕಾರ ಕೃಷಿ ಭೂಮಿಯಾಗಿದ್ದು, ಭೂಮಿಯ ಪೋಡಿ ಪ್ರಕ್ರಿಯೆಯೂ ಪೂರ್ಣಗೊಂಡಿಲ್ಲ ಎನ್ನಲಾಗಿದೆ. ಇದಲ್ಲದೆ, ವಿವಿಧ ಮಾಲೀಕತ್ವ ಹೊಂದಿರುವ ಜಾಗದಲ್ಲಿ ಪಾಲಿಕೆಯ ಅನುಮತಿ ಪಡೆಯದೇ ಬೃಹತ್ ಶೆಡ್ ನಿರ್ಮಿಸಿ, ‘ಸವರ್ಣ ಗ್ರ್ಯಾನೈಟ್’ ಹೆಸರಿನಲ್ಲಿ ವ್ಯಾಪಾರ ಆರಂಭಿಸಿರುವ ಆರೋಪ ಕೇಳಿಬಂದಿದೆ.
ಈ ಕುರಿತು ಈಗಾಗಲೇ ಪಾಲಿಕೆ ಅಧಿಕಾರಿಗಳು ಕರ್ನಾಟಕ ಮಹಾನಗರ ಪಾಲಿಕೆ ಕಾಯ್ದೆಯ ಸೆಕ್ಷನ್ 321 ಅಡಿಯಲ್ಲಿ ಡೆಮೋಲೇಶನ್ ನೋಟಿಸ್ ಜಾರಿಗೊಳಿಸಿದ್ದರು. ಆದರೆ, ನೋಟಿಸ್ ನೀಡಿದ ನಂತರವೂ ಕಾಮಗಾರಿ ನಿಲ್ಲಿಸದೇ ಮುಂದುವರಿಸಲಾಗಿದೆ ಎಂಬ ಆರೋಪವೂ ಇದೆ.
ಇದರಿಂದಾಗಿ ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಶೆಡ್ ಮುಂದೆ ಜೆಸಿಬಿ ನಿಲ್ಲಿಸಿ ಕೊನೆಯ ನೋಟಿಸ್ ನೀಡಿದ್ದಾರೆ. ಈ ವೇಳೆ ಶೆಡ್ ಮಾಲೀಕರು ತಾವೇ ಸ್ವಯಂಪ್ರೇರಿತವಾಗಿ ಅಕ್ರಮ ನಿರ್ಮಾಣವನ್ನು ತೆರವುಗೊಳಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಈ ಕುರಿತು ಪ್ರತಿಕ್ರಿಯಿಸಿದ ಪಾಲಿಕೆ ಆಯುಕ್ತ ಡಾ. ರುದ್ರೇಶ ಘಾಳಿ, “ಶೆಡ್ ಮಾಲೀಕರು ನಾಲ್ಕೈದು ದಿನಗಳೊಳಗೆ ತಾವೇ ಅಕ್ರಮ ನಿರ್ಮಾಣವನ್ನು ತೆರವುಗೊಳಿಸುವುದಾಗಿ ತಿಳಿಸಿದ್ದಾರೆ. ನಿಗದಿತ ಅವಧಿಯೊಳಗೆ ತೆರವುಗೊಳಿಸದಿದ್ದರೆ ಪಾಲಿಕೆ ನಿಯಮಾನುಸಾರ ಕ್ರಮ ಕೈಗೊಳ್ಳಲಿದೆ” ಎಂದು ಎಚ್ಚರಿಕೆ ನೀಡಿದ್ದಾರೆ.
ಈಗ ಮಾಲೀಕರು ನೀಡಿರುವ ಭರವಸೆಯಂತೆ ನಿಗದಿತ ಅವಧಿಯೊಳಗೆ ಶೆಡ್ ತೆರವುಗೊಳ್ಳುತ್ತದೆಯೇ ಅಥವಾ ಪಾಲಿಕೆ ಬಲವಂತದ ಕ್ರಮ ಕೈಗೊಳ್ಳುತ್ತದೆಯೇ ಎಂಬುದು ಕಾದು ನೋಡಬೇಕಿದೆ.
ಇನ್ನೂ ಅಕ್ರಮವಾಗಿ ಯಾರೆ ಕಟ್ಟಿದ್ರೂ ಹಾಗೂ ಪ್ರಭಾವಿ ವ್ಯಕ್ತಿಯಾಗಿದ್ದರು ಸಹ ಬಿಡುವ ಮಾತಿಲ್ಲ ಎಂದು ಮಹಾನಗರ ಪಾಲಿಕೆ ಆಯುಕ್ತರು ಖಡಕ್ ಆಗಿ ಎಚ್ಚರಿಕೆ ನೀಡಿದ್ದಾರೆ.ಅಲ್ಲದೆ ಅಕ್ರಮವಾಗಿ ಕಟ್ಟುವ ಕೆಲಸವನ್ನು ಮಾಡಿದ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕು, ನ್ಯಾಯ ಎಲ್ಲರಿಗೂ ಒಂದೆ ಎಂಬುದನ್ನಾ ತೋರಿಸುವ ಕೆಲಸವನ್ನು ಮಹಾನಗರ ಪಾಲಿಕೆ ಅಧಿಕಾರಿಗಳು ಮಾಡುತ್ತಾರೆ ಎನ್ನಲಾಗಿದೆ.
yallu