ಶಾಂತಿನಗರದಲ್ಲಿ ಭಕ್ತಿಭಾವದಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಧಾರ್ಮಿಕ ಸಭೆ
ಹುಬ್ಬಳ್ಳಿ: ಹುಬ್ಬಳ್ಳಿ ಗ್ರಾಮೀಣ ತಾಲೂಕಿನ ನಾಗಶೆಟ್ಟಿಕೊಪ್ಪ ವಲಯದ ಶಾಂತಿನಗರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಭಕ್ತಿ-ಶ್ರದ್ಧೆಯಿಂದ ಆಚರಿಸಲಾಯಿತು.
ಇಸ್ಕಾನ್ ಹುಬ್ಬಳ್ಳಿ-ಧಾರವಾಡದ ಶ್ರೀ ಸುಹೃದ್ ಗೋವಿಂದ ದಾಸ ಪ್ರಭು ಅವರು ದಿವ್ಯ ಸಾನಿಧ್ಯ ವಹಿಸಿ, ಶ್ರೀ ಕೃಷ್ಣನ ಮಹಿಮೆ ಹಾಗೂ ಆಧ್ಯಾತ್ಮಿಕ ವಿಚಾರಗಳ ಕುರಿತು ಪ್ರವಚನ ನೀಡಿದರು.
ಕಾರ್ಯಕ್ರಮವನ್ನು ಪ್ರಾದೇಶಿಕ ನಿರ್ದೇಶಕರಾದ ಶ್ರೀಮತಿ ದಯಾಶೀಲ ಅವರು ಉದ್ಘಾಟಿಸಿ, ಯೋಜನೆಯ ಮಹಿಳಾ ಸ್ವಾವಲಂಬನೆ, ಜ್ಞಾನವಿಕಾಸ, ಪ್ರಗತಿಬಂಧು, ಸ್ವಸಹಾಯ ಸಂಘಗಳ ಚಟುವಟಿಕೆ ಹಾಗೂ ಜನಜಾಗೃತಿ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.
ಮಹಾನಗರ ಪಾಲಿಕೆ ಸದಸ್ಯ ಶ್ರೀ ಬೀರಪ್ಪ ಖಡೇಕರ್ ಅವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಡಾ. ಮೋಹನಕುಮಾರ್, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಶ್ರೀ ರಮೇಶ ಮಹಾದೇವಪ್ಪನವರ, ಶ್ರೀ ಮಾರುತಿ ಸೇಟ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿವಿಧ ಸಾಮಾಜಿಕ ಕಾರ್ಯಗಳನ್ನು ಶ್ಲಾಘಿಸಿದ ಶ್ರೀ ರಮೇಶ ಮಹಾದೇವಪ್ಪನವರ, ಧರ್ಮದ ಹಾದಿಯಲ್ಲಿ ನಡೆಯುತ್ತಿರುವ ಇಂತಹ ಸೇವಾ ಕಾರ್ಯಗಳು ಸಮಾಜಕ್ಕೆ ಹೆಮ್ಮೆಯ ವಿಷಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ಕಲಾವತಿ ಆರ್. ದತ್ತವಾಡ ಹಾಗೂ ಕ್ಷೇತ್ರ ಯೋಜನಾಧಿಕಾರಿ ಶ್ರೀ ಸೋಮಲಿಂಗ ಕೆ. ಸೇರಿದಂತೆ ಪದಾಧಿಕಾರಿಗಳು, ಪ್ರಗತಿಬಂಧು, ಸ್ವಸಹಾಯ ಸಂಘದ ಸದಸ್ಯರು, ಮೇಲ್ವಿಚಾರಕರು ಹಾಗೂ ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು.
ಜನ್ಮಾಷ್ಟಮಿ ಅಂಗವಾಗಿ ನಾಗರಿಕರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಶ್ರೀಕೃಷ್ಣ ಹಾಗೂ ರಾಧೆಯ ವೇಷಧರಿಸಿದ ಮಕ್ಕಳಿಗೆ ಬಹುಮಾನ ವಿತರಿಸಿ ಸಂಭ್ರಮಿಸಲಾಯಿತು.
yallu