ಭರ್ಜರಿ ಭೇಟೆಯಾಡಿದ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು

ಭರ್ಜರಿ ಭೇಟೆಯಾಡಿದ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು
ಭರ್ಜರಿ ಭೇಟೆಯಾಡಿದ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು

ಧಾರವಾಡ: ಕಳೆದ 16 ವರ್ಷಗಳಿಂದ ಪೊಲೀಸರಿಗೆ ಚಕಮಕಿ ನೀಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕೊನೆಗೂ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.


2010ರ ಜೂನ್ 7ರಂದು ನಡೆದಿದ್ದ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯಾಗಿದ್ದ ಲೋಕೇಶ್ ಎಂಬಾತ ಶ್ರೀರಾಮ್ ಫೈನಾನ್ಸ್‌ನಲ್ಲಿ ಸೀಜ್ ಆಗಿದ್ದ ವಾಹನದ ನಂಬರ್ ಪ್ಲೇಟ್ ಬಳಸಿ ನಕಲಿ ದಾಖಲೆ ಸೃಷ್ಟಿಸಿ, ಹಿಂದೂಸ್ತಾನ್ ಲೀವರ್ ಕಂಪನಿಗೆ ಸೇರಿದ ಸುಮಾರು 14 ಲಕ್ಷ 87 ಸಾವಿರ ರೂಪಾಯಿ ಮೌಲ್ಯದ ಸಾಬೂನು, ಪೌಡರ್, ಶ್ಯಾಂಪೂ ಸೇರಿದಂತೆ ವಿವಿಧ ವಸ್ತುಗಳನ್ನು ವಂಚನೆ ಮೂಲಕ ಕೊಂಡೊಯ್ದು ಬೇರೆಡೆ ಮಾರಾಟ ಮಾಡಿದ್ದ ಎಂದು ಆರೋಪಿಸಲಾಗಿತ್ತು.


ಈ ಕುರಿತು 2010ರ ಜೂನ್ 11ರಂದು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಜಾಮೀನಿನ ಮೇಲೆ ಹೊರಬಂದಿದ್ದ ಆರೋಪಿ ನ್ಯಾಯಾಲಯಕ್ಕೆ ಹಾಜರಾಗದೆ ಪರಾರಿಯಾಗಿದ್ದ. ಇದರಿಂದ ನ್ಯಾಯಾಲಯ ಆರೋಪಿಯ ವಿರುದ್ಧ ಓಪನ್ ವಾರಂಟ್ ಜಾರಿ ಮಾಡಿತ್ತು.


ಆರೋಪಿಯನ್ನು ಪತ್ತೆಹಚ್ಚಲು ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ವಿಶೇಷ ತಂಡ ರಚಿಸಿ ಕಾರ್ಯಾಚರಣೆ ನಡೆಸಿದರು. ಆರೋಪಿಯು ತನ್ನ ಹೆಸರಿನಲ್ಲಿ ಯಾವುದೇ ಸಿಮ್ ಕಾರ್ಡ್ ಬಳಸದೇ, ಬೇರೆ ಬೇರೆ ವ್ಯಕ್ತಿಗಳ ಮೊಬೈಲ್‌ಗಳನ್ನು ಬಳಸುತ್ತಾ ಹಲವು ರಾಜ್ಯಗಳಲ್ಲಿ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ.
ತಾಂತ್ರಿಕ ಮಾಹಿತಿಗಳ ಆಧಾರದ ಮೇಲೆ ಒಂದು ತಿಂಗಳ ಕಾಲ ಆಂಧ್ರಪ್ರದೇಶ, ತಮಿಳುನಾಡು ಹಾಗೂ ಗೋವಾ ರಾಜ್ಯಗಳಲ್ಲಿ ಪೊಲೀಸರು ಶೋಧ ಕಾರ್ಯ ನಡೆಸಿದರು. ಕೊನೆಗೆ ಮೇ 14, 2026ರಂದು ಗೋವಾದಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾದರು.
ಈ ಕಾರ್ಯಾಚರಣೆಯಲ್ಲಿ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಎಂ.ಆರ್. ಚನ್ನಣ್ಣವರ ನೇತೃತ್ವದ ತಂಡ ಪ್ರಮುಖ ಪಾತ್ರ ವಹಿಸಿದೆ. ಪೊಲೀಸ್ ಸಿಬ್ಬಂದಿಯ ಕಾರ್ಯವನ್ನು ಧಾರವಾಡ ಜಿಲ್ಲಾ ಪೊಲೀಸ್ ಇಲಾಖೆ ಶ್ಲಾಘಿಸಿದೆ.