ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಹೊಸ ಮೇಯರ್-ಉಪ ಮೇಯರ್ ಆಯ್ಕೆ; ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಹೊಸ ಮೇಯರ್-ಉಪ ಮೇಯರ್ ಆಯ್ಕೆ; ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪ ಮೇಯರ್ ಚುನಾವಣೆಯಲ್ಲಿ ಮೇಯರ್ ಆಗಿ ದುರ್ಗಮ್ಮಾ ಬಿಜವಾಡ ಹಾಗೂ ಉಪ ಮೇಯರ್ ಆಗಿ ರತ್ನಬಾಯಿ ನಾಜರೆ ಆಯ್ಕೆಯಾಗಿದ್ದಾರೆ.

ಮೇಯರ್ ಸ್ಥಾನಕ್ಕೆ ಆಯ್ಕೆಯಾದ ದುರ್ಗಮ್ಮಾ ಬಿಜವಾಡ ಅವರು ಈ ಹಿಂದೆ ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು ಸಾಧಿಸಿ ಬಳಿಕ ಬಿಜೆಪಿಗೆ ಬೆಂಬಲ ನೀಡಿದ್ದರು. ಇದೀಗ ಬಿಜೆಪಿ ಬೆಂಬಲದೊಂದಿಗೆ ಮೇಯರ್ ಸ್ಥಾನ ಅಲಂಕರಿಸಿರುವುದು ಪಕ್ಷದ ಕಾರ್ಯಕರ್ತರು ಹಾಗೂ ಬೆಂಬಲಿಗರಲ್ಲಿ ಸಂತಸ ಮೂಡಿಸಿದೆ.

ಇನ್ನೊಂದೆಡೆ, ಉಪ ಮೇಯರ್ ಆಗಿ ರತ್ನಬಾಯಿ ನಾಜರೆ ಆಯ್ಕೆಯಾಗಿದ್ದು, ನೂತನ ಮೇಯರ್ ಮತ್ತು ಉಪ ಮೇಯರ್ ಅವರಿಗೆ ಬಿಜೆಪಿ ಮುಖಂಡರು, ಪಾಲಿಕೆ ಸದಸ್ಯರು ಹಾಗೂ ಕಾರ್ಯಕರ್ತರು ಅಭಿನಂದನೆ ಸಲ್ಲಿಸಿದರು.

ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ, ಜಯಘೋಷಗಳನ್ನು ಕೂಗಿ ಸಂಭ್ರಮಾಚರಣೆ ನಡೆಸಿದರು. ನೂತನ ಮೇಯರ್ ಹಾಗೂ ಉಪ ಮೇಯರ್ ಅವರ ನೇತೃತ್ವದಲ್ಲಿ ನಗರಾಭಿವೃದ್ಧಿಗೆ ಹೆಚ್ಚಿನ ವೇಗ ಸಿಗಲಿ ಎಂದು ಕಾರ್ಯಕರ್ತರು ಹಾಗೂ ಸಾರ್ವಜನಿಕರು ಆಶಯ ವ್ಯಕ್ತಪಡಿಸಿದರು.