ನರೇಂದ್ರ ಗ್ರಾಮಕ್ಕೆ ₹11.49 ಕೋಟಿ ಭಾಗ್ಯ - ವಿನಯ್ ಕುಲಕರ್ಣಿ ಅವರಿಂದ ಅಭಿವೃದ್ಧಿ ಪರ್ವಕ್ಕೆ ಚಾಲನೆ!

ನರೇಂದ್ರ ಗ್ರಾಮಕ್ಕೆ ₹11.49 ಕೋಟಿ ಭಾಗ್ಯ - ವಿನಯ್ ಕುಲಕರ್ಣಿ ಅವರಿಂದ ಅಭಿವೃದ್ಧಿ ಪರ್ವಕ್ಕೆ ಚಾಲನೆ!

ನರೇಂದ್ರ ಗ್ರಾಮದ ಸಮಗ್ರ ಅಭಿವೃದ್ಧಿಗೆ ₹11.49 ಕೋಟಿ ಅನುದಾನ
ಧಾರವಾಡ: ಧಾರವಾಡ ತಾಲ್ಲೂಕಿನ ನರೇಂದ್ರ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ₹11 ಕೋಟಿ 49.50 ಲಕ್ಷ ಅನುದಾನ ಮಂಜೂರಾಗಿದ್ದು, ವಿವಿಧ ಇಲಾಖೆಗಳ ಮೂಲಕ ಕೈಗೊಳ್ಳಲಾಗುತ್ತಿರುವ 18 ಪ್ರಮುಖ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ವಿನಯ್ ಕುಲಕರ್ಣಿ ಅವರು ಇಂದು ಚಾಲನೆ ನೀಡಿದರು.

ಗ್ರಾಮದ ಮೂಲಸೌಕರ್ಯಗಳನ್ನು ಬಲಪಡಿಸುವ ಉದ್ದೇಶದಿಂದ ರಸ್ತೆ ಅಭಿವೃದ್ಧಿ, ಕೆರೆಗಳ ಸುಧಾರಣೆ, ಸಿ.ಸಿ. ರಸ್ತೆ ಹಾಗೂ ಗಟಾರ ನಿರ್ಮಾಣ, ಸಮುದಾಯ ಭವನಗಳ ನಿರ್ಮಾಣ, ಆರೋಗ್ಯ ಉಪಕೇಂದ್ರ ಹಾಗೂ ಧಾರ್ಮಿಕ ಮತ್ತು ಸಾರ್ವಜನಿಕ ಸ್ಥಳಗಳ ಅಭಿವೃದ್ಧಿಗೆ ಅನುದಾನ ಬಳಸಲಾಗುತ್ತಿದೆ.
ಕುಂಭಾಪುರ ಕೆರೆ ಸುಧಾರಣೆಗೆ ₹3 ಕೋಟಿ 24 ಲಕ್ಷ, ಮುಮ್ಮಿಗಟ್ಟಿ–ನರೇಂದ್ರ–ಕಲಘಟಗಿ ಜಿಲ್ಲಾ ಮುಖ್ಯ ರಸ್ತೆ ಸುಧಾರಣೆಗೆ ₹3 ಕೋಟಿ ಹಾಗೂ ನರೇಂದ್ರ–ಮಂಗಲಗಟ್ಟಿ ಜಿಲ್ಲಾ ಮುಖ್ಯ ರಸ್ತೆ ಸುಧಾರಣೆಗೆ ₹1 ಕೋಟಿ 55 ಲಕ್ಷ ಅನುದಾನ ಸೇರಿದಂತೆ ಹಲವು ಕಾಮಗಾರಿಗಳಿಗೆ ಹಣ ಮಂಜೂರಾಗಿದೆ.
ಇದರ ಜೊತೆಗೆ ನರೇಂದ್ರ ಗ್ರಾಮದ ಹಿರೇಕೆರೆ ಸುಧಾರಣೆ, ನರೇಂದ್ರ ಕ್ರಾಸ್‌ನಿಂದ ಮಳೇಪಜನ ಮಠದವರೆಗೆ ರಸ್ತೆ ಅಭಿವೃದ್ಧಿ, ಎಸ್.ಸಿ. ಕಾಲೋನಿಯಲ್ಲಿ ಸಿ.ಸಿ. ರಸ್ತೆ ಹಾಗೂ ಗಟಾರ ನಿರ್ಮಾಣ, ವಿವಿಧ ದೇವಸ್ಥಾನಗಳ ಬಳಿಯಲ್ಲಿ ಸಮುದಾಯ ಭವನ ನಿರ್ಮಾಣ, ಮಸೀದಿ ಕಟ್ಟಡ ನಿರ್ಮಾಣ, ಗರಡಿಮನೆ ನಿರ್ಮಾಣ, ಆರೋಗ್ಯ ಉಪಕೇಂದ್ರ ಸುಧಾರಣೆ ಹಾಗೂ ಸ್ಮಶಾನ ಅಭಿವೃದ್ಧಿ ಸೇರಿದಂತೆ ಒಟ್ಟು 18 ಕಾಮಗಾರಿಗಳು ನಡೆಯಲಿವೆ.

ಗ್ರಾಮದ ರಸ್ತೆ ಸಂಪರ್ಕ ಸುಧಾರಣೆ, ಜಲಮೂಲಗಳ ಸಂರಕ್ಷಣೆ, ಸಾರ್ವಜನಿಕ ಆರೋಗ್ಯ ಹಾಗೂ ವಿವಿಧ ಸಮುದಾಯಗಳ ಅಗತ್ಯಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಈ ಕಾಮಗಾರಿಗಳಿಂದ ನರೇಂದ್ರ ಗ್ರಾಮದ ಮೂಲಸೌಕರ್ಯ ಮತ್ತಷ್ಟು ಬಲಗೊಂಡು, ಸಮಗ್ರ ಅಭಿವೃದ್ಧಿಗೆ ವೇಗ ಸಿಗಲಿದೆ ಎಂದು ಶಾಸಕ ವಿನಯ್ ಕುಲಕರ್ಣಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಶ್ರಮವಹಿಸಿ ಕಾರ್ಯ ನಿರ್ವಹಿಸಿದ ಅಂಗನವಾಡಿ ಕಾರ್ಯಕರ್ತೆಯರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಶ್ರೀಮತಿ ಶಿವಲೀಲಾ ವಿನಯ ಕುಲಕರ್ಣಿ, ವೈಶಾಲಿ ಕುಲಕರ್ಣಿ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅರವಿಂದ ಏಗನಗೌಡರ, ಈಶ್ವರ್ ಶಿವಳ್ಳಿ, ಶಂಕರ ಇಳಗೇರ, ಮಂಜುನಾಥ್ ತಿರಲಾಪುರ, ಕರೆಪ್ಪ ಮಾದರ, ಆತ್ಮನಂದ ಹುಂಬೇರಿ, ಜಗದೀಶ್ ಸೋಗಿ, ಚನಮಲ್ಲಪ್ಪ ಮೊರಬ, ಬಸವರಾಜ್ ವೆಂಕಟಪುರ, ಬಸವಪ್ರಭು ಹುಂಬೇರಿ, ಕುಮಾರ್ ನಾಡಗೌಡದೇಸಾಯಿ, ಶ್ರೀಶೈಲ್ ಕಾಶೀನಾಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.