ಗೋಕುಲ ರಸ್ತೆಯಲ್ಲಿ ಅಕ್ರಮ ಶೆಡ್ ನೋಟಿಸ್‌ಗೂ ಡೋಂಟ್ ಕೇರ್! ಪಾಲಿಕೆ ಕಣ್ಣೆದುರೇ ಅಕ್ರಮ ಮಳಿಗೆ?
ಹುಬ್ಬಳ್ಳಿ:ಹುಬ್ಬಳ್ಳಿಯ ಗೋಕುಲ್ ರೋಡ್ ಮುಖ್ಯ ರಸ್ತೆಯಲ್ಲಿ ಪಾಲಿಕೆ ನೋಟಿಸ್‌ಗೂ ಕ್ಯಾರೇ ಎನ್ನದೇ ಅಕ್ರಮವಾಗಿ ನಿರ್ಮಿಸಿರುವ ಶೆಡ್‌ನಲ್ಲಿ ವಾಣಿಜ್ಯ ವಹಿವಾಟು ನಡೆಸುತ್ತಿರುವ ಆರೋಪ ಕೇಳಿಬಂದಿದೆ.
ಶಾಸಕ ಮಹೇಶ ಟೆಂಗಿನಕಾಯಿ ಅವರ ನಿವಾಸದ ಸಮೀಪದಲ್ಲಿರುವ ಕೃಷ್ಣಾಪುರ ಗ್ರಾಮದ ರಿ.ಸ.ನಂ. 91, ಹಿಸ್ಸಾ 18/2ರ ಜಾಗದಲ್ಲಿ ‘ ಗ್ರಾನೈಟ್ಸ್’ ಹೆಸರಿನಲ್ಲಿ ವಾಣಿಜ್ಯ ಚಟುವಟಿಕೆ ನಡೆಯುತ್ತಿದೆ. ಈ ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಶೆಡ್ ತೆರವುಗೊಳಿಸುವಂತೆ ಮಹಾನಗರ ಪಾಲಿಕೆ ಈಗಾಗಲೇ ಹಲವು ಬಾರಿ ನೋಟಿಸ್ ಜಾರಿ ಮಾಡಿದೆ ಎನ್ನಲಾಗಿದೆ.
ಕಳೆದ ಜೂನ್ 8, 2026ರಂದು ಪಾಲಿಕೆಯ ನಗರ ಯೋಜನೆ ಉಪ ನಿರ್ದೇಶಕರು 15 ದಿನಗಳೊಳಗೆ ಅನಧಿಕೃತ ಶೆಡ್ ತೆರವುಗೊಳಿಸುವಂತೆ ನೋಟಿಸ್ ನೀಡಿದ್ದರೂ, ಇದುವರೆಗೂ ಸಂಪೂರ್ಣ ತೆರವುಗೊಳಿಸದೇ ವಾಣಿಜ್ಯ ಚಟುವಟಿಕೆ ಮುಂದುವರಿದಿದೆ ಎಂಬ ಆರೋಪ ಕೇಳಿಬಂದಿದೆ.
ಇನ್ನು, ಜಾಗ ಕೃಷಿ ಭೂಮಿಯಾಗಿದ್ದು, ಸೂಕ್ತ ಪೋಡಿ ಸೇರಿದಂತೆ ಅಗತ್ಯ ಪ್ರಕ್ರಿಯೆಗಳು ಪೂರ್ಣಗೊಂಡಿಲ್ಲ ಎಂಬ ಆರೋಪವೂ ಕೇಳಿಬಂದಿದೆ. ಬೇರೆ ಬೇರೆ ಮಾಲೀಕತ್ವದ ಜಾಗದಲ್ಲೂ ನಿಯಮ ಉಲ್ಲಂಘಿಸಿ ವಾಣಿಜ್ಯ ಕಟ್ಟಡ ಹಾಗೂ ಗ್ರಾನೈಟ್ ವ್ಯಾಪಾರ ನಡೆಸಲಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.
ಪಾಲಿಕೆಯ ಸೆಕ್ಷನ್ 321ರ ಅಡಿಯಲ್ಲಿ ಡೆಮಾಲಿಷನ್ ನೋಟಿಸ್ ನೀಡಲಾಗಿದ್ದು, ತೆರವು ಕಾರ್ಯಾಚರಣೆಗೆ ಜೆಸಿಬಿ ಕೂಡ ಸ್ಥಳಕ್ಕೆ ಬಂದಿತ್ತು. ಆದರೆ, ಶೆಡ್ ತೆರವು ಮಾಡಿಕೊಳ್ಳುವುದಾಗಿ ಹೇಳಿದ ಬಳಿಕ ಕಾರ್ಯಾಚರಣೆ ಸ್ಥಗಿತಗೊಂಡಿದ್ದು, ಇದುವರೆಗೂ ಶೆಡ್ ತೆರವಾಗಿಲ್ಲ ಎಂಬುದು ಸಾರ್ವಜನಿಕರ ಆರೋಪ. ಒಂದೆಡೆ ಪುಟ್‌ಪಾತ್ ಮೇಲೆ ಸಣ್ಣ ಅಂಗಡಿ ಇಟ್ಟರೂ ತಕ್ಷಣ ತೆರವುಗೊಳಿಸುವ ಪಾಲಿಕೆ ಅಧಿಕಾರಿಗಳು, ಮತ್ತೊಂದೆಡೆ ಮುಖ್ಯ ರಸ್ತೆಯಲ್ಲೇ ದೊಡ್ಡ ಪ್ರಮಾಣದ ಅಕ್ರಮ ನಿರ್ಮಾಣದ ಆರೋಪವಿದ್ದರೂ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿರುವುದೇಕೆ? ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.
ಯಾರ ಒತ್ತಡಕ್ಕೆ ಪಾಲಿಕೆ ಅಧಿಕಾರಿಗಳು ಮಣಿದಿದ್ದಾರೆ? ಎರಡು ಬಾರಿ ನೋಟಿಸ್ ನೀಡಿದರೂ ತೆರವುಗೊಳಿಸದಿರುವುದಕ್ಕೆ ಕಾರಣವೇನು?
ನಿಯಮ ಎಲ್ಲರಿಗೂ ಒಂದೇ ಅಲ್ಲವೇ?
ಅಕ್ರಮ ನಿರ್ಮಾಣ ನಿಜವಾಗಿದ್ದರೆ ಕೂಡಲೇ ತೆರವುಗೊಳಿಸಿ, ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಇನ್ನೂ ಪಾಲಿಕೆ ಅಧಿಕಾರಿಗಳು ಮೂರನೇ ನೋಟೀಸ್ ಕೊಟ್ಟು ಈ ಬಗ್ಗೆ ಯಾವ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ವರದಿ:- ರಾಜು ಮುದ್ಗಲ್ ಹುಬ್ಬಳ್ಳಿ
yallu