ಧಾರವಾಡ 71 ಮತಕ್ಷೇತ್ರದಲ್ಲಿ 'SIR' ಅಭಿಯಾನಕ್ಕೆ ವೇಗ: ಅರ್ಹ ಮತದಾರರು ನೋಂದಣಿಯಿಂದ ವಂಚಿತರಾಗದಂತೆ ಜಾಗೃತಿ – ಶ್ರೀಮತಿ ಶಿವಲೀಲಾ ವಿನಯ ಕುಲಕರ್ಣಿ

ಧಾರವಾಡ 71 ಮತಕ್ಷೇತ್ರದಲ್ಲಿ 'SIR' ಅಭಿಯಾನಕ್ಕೆ ವೇಗ: ಅರ್ಹ ಮತದಾರರು ನೋಂದಣಿಯಿಂದ ವಂಚಿತರಾಗದಂತೆ ಜಾಗೃತಿ – ಶ್ರೀಮತಿ ಶಿವಲೀಲಾ ವಿನಯ ಕುಲಕರ್ಣಿ

ಧಾರವಾಡ: ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (SIR) ಅಭಿಯಾನದ ಅಂಗವಾಗಿ ಧಾರವಾಡ 71 ವಿಧಾನಸಭಾ ಕ್ಷೇತ್ರದ ವಿವಿಧ ವಾರ್ಡ್‌ಗಳಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಯಾವುದೇ ಅರ್ಹ ಮತದಾರರು ಮತದಾರರ ಪಟ್ಟಿಯಿಂದ ವಂಚಿತರಾಗಬಾರದು ಎಂದು ಕಾಂಗ್ರೆಸ್ ಮುಖಂಡೆ ಶ್ರೀಮತಿ ಶಿವಲೀಲಾ ವಿನಯ ಕುಲಕರ್ಣಿ ಕರೆ ನೀಡಿದರು.

ಕ್ಷೇತ್ರದ ವಿವಿಧ ಬಡಾವಣೆಗಳಲ್ಲಿ ಮನೆ-ಮನೆಗೆ ಭೇಟಿ ನೀಡಿ ಸಾರ್ವಜನಿಕರೊಂದಿಗೆ ಸಂವಾದ ನಡೆಸಿದ ಅವರು, ಮತದಾರರ ಪಟ್ಟಿಯ ಪರಿಷ್ಕರಣೆ ಹಾಗೂ ನೋಂದಣಿ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬ ನಾಗರಿಕರು ಸಕ್ರಿಯವಾಗಿ ಭಾಗವಹಿಸುವಂತೆ ಮನವಿ ಮಾಡಿದರು.
ಈ ವೇಳೆ ಮಾತನಾಡಿದ ಅವರು, "SIR ಅಭಿಯಾನವು ಪ್ರಜಾಪ್ರಭುತ್ವವನ್ನು ಮತ್ತಷ್ಟು ಬಲಪಡಿಸುವ ಮಹತ್ವದ ಕಾರ್ಯಕ್ರಮವಾಗಿದೆ. ಬೂತ್ ಮಟ್ಟದ ಅಧಿಕಾರಿಗಳು (BLO) ವಿತರಿಸುವ ನಮೂನೆಗಳನ್ನು ಪ್ರತಿಯೊಬ್ಬ ಅರ್ಹ ಮತದಾರರು ಪಡೆದು, ಸರಿಯಾದ ಮಾಹಿತಿಯೊಂದಿಗೆ ಭರ್ತಿ ಮಾಡಿ ನಿಗದಿತ ಅವಧಿಯೊಳಗೆ ಸಲ್ಲಿಸಬೇಕು. ಯಾವುದೇ ಕಾರಣಕ್ಕೂ ಅರ್ಹ ಮತದಾರರು ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು," ಎಂದು ಹೇಳಿದರು.


ಧಾರವಾಡ 71 ಕ್ಷೇತ್ರದಲ್ಲಿ ನಗರ ಘಟಕದ ವ್ಯಾಪ್ತಿಯಲ್ಲಿ ಈಗಾಗಲೇ ಶೇ.57ರಷ್ಟು ನಮೂನೆಗಳ ವಿತರಣೆ ಪೂರ್ಣಗೊಂಡಿದ್ದು, ಉಳಿದ ಅರ್ಹ ಮತದಾರರಿಗೂ ಶೀಘ್ರದಲ್ಲಿ ನಮೂನೆಗಳನ್ನು ತಲುಪಿಸುವಂತೆ ಕಾರ್ಯಕರ್ತರು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.


SIR ಅಭಿಯಾನದ ಯಶಸ್ಸಿಗೆ ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದ್ದು, ಪ್ರತಿಯೊಬ್ಬರೂ ಮತದಾನದ ಹಕ್ಕನ್ನು ಕಾಪಾಡಿಕೊಳ್ಳುವ ಜವಾಬ್ದಾರಿಯನ್ನು ಅರಿತು ಈ ಅಭಿಯಾನದಲ್ಲಿ ಭಾಗವಹಿಸಬೇಕು ಎಂದು ಅವರು ತಿಳಿಸಿದರು.


ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷ ಅರವಿಂದ ಏಗನಗೌಡರ, ಪಾಲಿಕೆ ಸದಸ್ಯರಾದ ರಾಜಶೇಖರ್ ಕಮತಿ ಹಾಗೂ ದೀಪಾ ನೀರಲಕಟ್ಟಿ, ಮುಖಂಡರಾದ ಬಸೀರ್ ಹಲಭಾವಿ, ಜಾಫರ್ ಕಳ್ಳಿಮನಿ, ಸಂತೋಷ ನೀರಲಕಟ್ಟಿ, ಎಸ್.ಎ. ಗಿರಿಯಪ್ಪನವರ, ಕರೆಪ್ಪ ಮಾಳಗಿಮನಿ, ಶ್ರೀಕಾಂತ ತಾಯನ್ನವರ, ಶ್ರೀಶೈಲ್ ಭಾವಿಕಟ್ಟಿ, ಪ್ರಕಾಶ ಪಟ್ಟಣಶೆಟ್ಟಿ, ಹಸೀನಾ ಆಚಮ್ಮನವರ, ಬೂತ್ ಮಟ್ಟದ ಅಧಿಕಾರಿಗಳು (BLOಗಳು) ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.