ಶಾಸಕ ವಿನಯ್ ಕುಲಕರ್ಣಿಗೆ ಬಿಗ್ ರಿಲೀಫ್; ಧಾರವಾಡ ಪ್ರವೇಶಕ್ಕೆ ಕೋರ್ಟ್ ಗ್ರೀನ್ ಸಿಗ್ನಲ್!
ಧಾರವಾಡ ಗ್ರಾಮೀಣ ಶಾಸಕ ವಿನಯ್ ಕುಲಕರ್ಣಿ ಅವರಿಗೆ ಮತ್ತೊಂದು ಮಹತ್ವದ ರಿಲೀಫ್ ಸಿಕ್ಕಿದೆ. ಧಾರವಾಡ ಪ್ರವೇಶಕ್ಕೆ ವಿಧಿಸಲಾಗಿದ್ದ ಷರತ್ತನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸಡಿಲಿಸಿ ಆದೇಶ ಹೊರಡಿಸಿದೆ.
ಸಾಕ್ಷ್ಯ ನಾಶಕ್ಕೆ ಯತ್ನಿಸಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಅವರು ಧಾರವಾಡ ಜಿಲ್ಲೆಗೆ ಪ್ರವೇಶಿಸದಂತೆ ಈ ಹಿಂದೆ ಷರತ್ತು ವಿಧಿಸಲಾಗಿತ್ತು. ಆದರೆ, ಕೊಲೆ ಪ್ರಕರಣದಲ್ಲಿ ಹೈಕೋರ್ಟ್ ಈಗಾಗಲೇ ಅವರಿಗೆ ಧಾರವಾಡಕ್ಕೆ ತೆರಳಲು ಅನುಮತಿ ನೀಡಿತ್ತು. ಈ ಹಿನ್ನೆಲೆಯಲ್ಲಿ ಸಾಕ್ಷ್ಯ ನಾಶ ಪ್ರಕರಣದಲ್ಲಿದ್ದ ಧಾರವಾಡ ಪ್ರವೇಶದ ನಿರ್ಬಂಧವನ್ನು ರದ್ದುಪಡಿಸುವಂತೆ ವಿನಯ್ ಕುಲಕರ್ಣಿ ಅವರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮೊರೆ ಹೋಗಿದ್ದರು.
ಇದೀಗ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಧಾರವಾಡಕ್ಕೆ ತೆರಳದಂತೆ ವಿಧಿಸಿದ್ದ ಷರತ್ತನ್ನು ರದ್ದುಗೊಳಿಸಿ ಆದೇಶಿಸಿದೆ. ಇದರಿಂದಾಗಿ ವಿನಯ್ ಕುಲಕರ್ಣಿ ಅವರು ಧಾರವಾಡ ಜಿಲ್ಲೆಗೆ ತೆರಳಲು ಇದ್ದ ಕಾನೂನು ತೊಡಕು ದೂರವಾಗಿದೆ.
ಆದರೆ, ಧಾರವಾಡಕ್ಕೆ ತೆರಳುವ ವೇಳೆ ಮೆರವಣಿಗೆ, ಅದ್ಧೂರಿ ಸ್ವಾಗತ ಸೇರಿದಂತೆ ಯಾವುದೇ ರೀತಿಯ ಕಾರ್ಯಕ್ರಮಗಳನ್ನು ನಡೆಸದಂತೆ ಷರತ್ತು ವಿಧಿಸಲಾಗಿದೆ.
ಒಟ್ಟಿನಲ್ಲಿ, 6 ವರ್ಷಗಳ ಬಳಿಕ ತಮ್ಮ ಕ್ಷೇತ್ರಕ್ಕೆ ಮರಳಲು ಸಜ್ಜಾಗಿರುವ ವಿನಯ್ ಕುಲಕರ್ಣಿ ಅವರಿಗೆ ಇದೀಗ ಮತ್ತೊಂದು ಮಹತ್ವದ ಕಾನೂನು ರಿಲೀಫ್ ಸಿಕ್ಕಿದ್ದು, ಅವರ ಆಗಮನಕ್ಕಾಗಿ ಕಾಯುತ್ತಿರುವ ಕಾರ್ಯಕರ್ತರಲ್ಲಿ ಸಂತಸ ಮತ್ತಷ್ಟು ಹೆಚ್ಚಾಗಿದೆ.
yallu