"ವಿಶ್ವ ಸ್ವರ" ಸಂಗಮಕ್ಕೆ ಅದ್ಧೂರಿ ಮೆರುಗು; ಸಂಗೀತ ಸಾಧಕರಿಗೆ ಗೌರವ ಸನ್ಮಾನ
ಹುಬ್ಬಳ್ಳಿ: ಶ್ರೀ ಶಾರದೆ ಸಂಗೀತ ಸಾಂಸ್ಕೃತಿಕ ವಿದ್ಯಾಸಂಸ್ಥೆ (ರಿ) ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಧಾರವಾಡ ಇವರ ಸಂಯುಕ್ತ ಆಶ್ರಯದಲ್ಲಿ "ವಿಶ್ವ ಸ್ವರ" ಸಂಗಮ ಹಾಗೂ ಗೌರವ ಸನ್ಮಾನ ಕಾರ್ಯಕ್ರಮವನ್ನು ನಗರದ ಇಂಡಸ್ಟ್ರಿಯಲ್ ಎಸ್ಟೇಟ್‌ನಲ್ಲಿರುವ ಶ್ರೀ ಗುರುಪುಟ್ಟರಾಜ ಸಭಾಭವನದಲ್ಲಿ ಅದ್ದೂರಿಯಾಗಿ ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಶಾಸಕ ಮಹೇಶ್ ತೆಂಗಿನಕಾಯಿ, ಭಾರತೀಯ ಜನತಾ ಪಕ್ಷದ ಜಿಲ್ಲಾ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಖ್ಯಾತ ಹಿಂದೂಸ್ತಾನಿ ಗಾಯಕರಾದ ಪಂಡಿತ ಅರುಣ್ ದೇಸಾಯಿ, ಖ್ಯಾತ ಹಾರ್ಮೋನಿಯಂ ವಾದಕರಾದ ಪಂಡಿತ ಅಮರಯ್ಯ ಹಿರೆಮಠ, ಶ್ರೀ ಗುರುಪುಟ್ಟರಾಜ ಸಂಸ್ಥೆಯ ಅಧ್ಯಕ್ಷ ಅಮೃತ ಉಳ್ಳಿಕಾಶಿ, ಶ್ರೀ ಶಾರದೆ ಸಂಗೀತ ಸಾಂಸ್ಕೃತಿಕ ವಿದ್ಯಾಸಂಸ್ಥೆಯ ಅಧ್ಯಕ್ಷೆ ಲಲಿತಾ ಉಳ್ಳಿಕಾಶಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಹಿಂದೂಸ್ತಾನಿ ಸಂಗೀತ ಕ್ಷೇತ್ರದ ಸಾಧಕರಾದ ಪಂಡಿತ ಅರುಣ್ ದೇಸಾಯಿ ಹಾಗೂ ಪಂಡಿತ ಅಮರಯ್ಯ ಹಿರೆಮಠ ಅವರನ್ನು ಸಂಸ್ಥೆಯ ವತಿಯಿಂದ ಶಾಲು ಹೊದಿಸಿ, ಫಲಕ ನೀಡಿ ವೇದಿಕೆಯಲ್ಲಿದ್ದ ಗಣ್ಯರು ಗೌರವ ಸನ್ಮಾನ ಮಾಡಿದರು.
ಕಾರ್ಯಕ್ರಮದಲ್ಲಿ ಶ್ರೀಮತಿ ರಶ್ಮಿ ಉಳ್ಳಿಕಾಶಿ ಅವರು ಸುಗಮ ಸಂಗೀತ ಹಾಗೂ ಶ್ರೀಮತಿ ಮೀನಾಕ್ಷಿ ಹಂಜಗಿ ಅವರು ಜಾನಪದ ಗೀತೆಗಳನ್ನು ಸುಮಧುರವಾಗಿ ಹಾಡಿ ಸಂಗೀತಾಸಕ್ತರ ಮೆಚ್ಚುಗೆಗೆ ಪಾತ್ರರಾದರು. ವಿವಿಧ ಸಂಸ್ಥೆಗಳ ಮಕ್ಕಳು ಗಾಯನ ಹಾಗೂ ನೃತ್ಯ ಪ್ರದರ್ಶನ ನೀಡಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡರು.
ಈ ವೇಳೆ ಮಾತನಾಡಿದ ಶಾಸಕ ಮಹೇಶ್ ತೆಂಗಿನಕಾಯಿ, "ಮಕ್ಕಳು ನಮ್ಮ ದೇಶದ ಭವಿಷ್ಯ. ಉತ್ತಮ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರವೂ ಅತ್ಯಗತ್ಯ. ಪುಸ್ತಕಗಳಿಂದ ಜ್ಞಾನ ದೊರೆಯುತ್ತದೆ, ಆದರೆ ಮಕ್ಕಳ ಆಸಕ್ತಿಯನ್ನು ಗುರುತಿಸಿ ಪ್ರೋತ್ಸಾಹಿಸುವುದು ಮುಖ್ಯ. ಸಂಗೀತ, ನೃತ್ಯ ಹಾಗೂ ಕಲೆಗಳು ಮಕ್ಕಳ ಮನಸ್ಸನ್ನು ಶಾಂತಗೊಳಿಸಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ. ಪ್ರತಿಭೆಯನ್ನು ಬೆಳೆಸಲು ಶ್ರೀ ಶಾರದೆ ಸಂಗೀತ ಸಾಂಸ್ಕೃತಿಕ ವಿದ್ಯಾಸಂಸ್ಥೆ ಉತ್ತಮ ವೇದಿಕೆಯಾಗಿದೆ" ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
yallu